ಸಿಂದರು

	ಒಂದು ಸಾಮಂತ ರಾಜಮನೆತನ. ಇವರ ಮೂಲದ ಬಗ್ಗೆ 10ನೆಯ ಶತಮಾನದ ಒಂದು ಶಾಸನದಲ್ಲಿ, ನಾಗರಾಜ ಧರಣೇಂದ್ರ ಪಾತಾಳದಿಂದ ಭೂಲೋಕವನ್ನು ನೋಡಲು ಬಂದಾಗ ಇವನಿಗೆ ನಿಡುದೋಳ ಸಿಂದನೆಂಬ ಮಗ ಆಹಿಚ್ಛತ್ರದಲ್ಲಿ ಹುಟ್ಟಿದ. ಈ ರಾಜವಂಶದ ಆದ್ಯನಾದ ನಿಡುದೋಳ ಸಿಂದ ರಾಜ್ಯಕ್ಕೆ ಪ್ರಭುವಾಗಿ ಕದಂಬ ರಾಜಕುಮಾರಿಯನ್ನು ಮದುವೆಯಾದ ಎಂಬ ಒಂದು ಕಥೆ ಇದೆ. ಅದೇ ಕಾಲದ ಹಲವು ಶಾಸನಗಳಲ್ಲಿ ಇವರನ್ನು ನಾಗವಂಶೀಯರು, ಭೋಗಾವತೀಪುರವರಾಧೀಶ್ವರರು ಎಂದು ಕರೆಯಲಾಗಿದೆ. ಇಮ್ಮಡಿ ವಿಕ್ರಮಾದಿತ್ಯನ (655-81) ಕಾಲದ ಕುಕ್ಕನೂರಿನ ಒಂದು ಶಾಸನ ಸಿಂದರಸನೆಂಬವ ಆ ಪ್ರದೇಶವನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಹಾಗೆಯೇ ಇಮ್ಮಡಿ ಕೀರ್ತಿವರ್ಮನ (745-57) ಕಾಲದ ಆಡೂರು (ಧಾರವಾಡ ಜಿಲ್ಲೆ) ಶಾಸನದಲ್ಲಿ ಪಾಂಥಿಪುರವನ್ನು (ಹಾನುಗಲ್ಲು) ಆಳುತ್ತಿದ್ದ ಸಿಂದರಸ ಎಂಬವನ ಹೆಸರಿದೆ. ಇವೇ ಈ ವಂಶೀಯರ ಬಗ್ಗೆ ದೊರಕಿರುವ ಅತ್ಯಂತ ಪ್ರಾಚೀನ ಉಲ್ಲೇಖಗಳು. ಈ ವಂಶದ ಶಾಖೆಗಳು ಕರ್ನಾಟಕದ ಹಲವು ಭಾಗಗಳಲ್ಲಿ ಬೇರೆ ಬೇರೆ ಕಾಲದಲ್ಲಿ ಆಧಿಕಾರದಲ್ಲಿದ್ದುವು. ಪ್ರಸ್ತುತ ಲೇಖನದಲ್ಲಿ ಅವುಗಳ ವಿವರಗಳನ್ನು ಕೊಡಲಾಗಿದೆ.					
		*
	ಸಿಂದರು, ಎರಂಬರಗೆಯ: 11-13ನೆಯ ಶತಮಾನಗಳಲ್ಲಿ ಎರಂಬರಗೆಯನ್ನು (ಈಗಿನ ಎಲಬುರ್ಗಿ) ರಾಜಧಾನಿಯನ್ನಾಗಿ ಮಾಡಿಕೊಂಡು ಕಿಸುಕಾಡು 70, ಬಾಗಡಗೆ 70, ಕೆಳವಡಿ 30, ನರೆಯಂಗಲ್ಲು 12, ಕರಿವಿಡಿ 30 ಮುಂತಾದ ಪ್ರದೇಶಗಳನ್ನು ಆಳಿದ ಒಂದು ಮಾಂಡಲಿಕ ಮನೆತನ. ಸಿಂದರ ಒಂದು ಶಾಖೆ.

	ಇವರ ಶಾಸನಗಳಲ್ಲಿ ಮೂಲ ಪುರುಷನ ಹೆಸರನ್ನು ಹೇಳದೆ ಆಚುಗಿ (I), ನಾಕ, ಸಿಂಗ (I) ದಾಸ, ದಾಮ, ಚಾವುಂಡ (I) ಮತ್ತು ಚಾವ ಎಂಬ ಏಳು ಜನ ಸಹೋದರರಿಂದ ಇವರ ವಂಶವೃಕ್ಷ ಪ್ರಾರಂಭವಾಗುತ್ತದೆ. ಬಾಗಡಗೆಯ ಸಿಂದರ ವಂಶಕ್ಕೆ ಸೇರಿದ ನಾಗಾದಿತ್ಯನೇ ಈ ಏಳು ಜನ ಸಹೋದರರ ತಂದೆಯಿರಬೇಕೆಂದು ಕೆಲವರ ಮತ. ಈ ಶಾಖೆಯ ಮೊದಲ ದೊರೆ ಒಂದನೆಯ ಆಚುಗಿ. ಇವನು ಕಲ್ಯಾಣದ ಚಾಳುಕ್ಯರ (6ನೆಯ ವಿಕ್ರಮಾದಿತ್ಯನ) ಸಾಮಂತನಾಗಿದ್ದ. ಒಂದನೆಯ ಆಚುಗಿಯ ಮಗ ಬಮ್ಮರಸ. ಈತ 1083ರಲ್ಲಿ 6ನೆಯ ವಿಕ್ರಮಾದಿತ್ಯನ ಅಧೀನದಲ್ಲಿ ಕಿಸುಕಾಡು 70 ಮತ್ತು ನರೆಯಂಗಲ್ಲು 12 ಪ್ರದೇಶಗಳನ್ನು ಆಳುತ್ತಿದ್ದ. ಈತನಿಗೆ ಮಕ್ಕಳಿಲ್ಲದ ಕಾರಣ ಈತನ ಚಿಕ್ಕಪ್ಪನ (ಸಿಂಗ I) ಮಗ ಆಚುಗಿ II ಸು. 1100ರಲ್ಲಿ ಅಧಿಕಾರಕ್ಕೆ ಬಂದ. ಬಹುಶಃ ಆಚುಗಿ ಇನ್ನೂ ಅಪ್ರಾಪ್ತವಯಸ್ಕನಾಗಿದ್ದ ಕಾರಣ ಕಿಸುಕಾಡು 70 ಮತ್ತು ಕರಿವಿಡಿ 30 ಪ್ರದೇಶಗಳನ್ನು ಕೆಲಕಾಲ ಅವರರಸನೆಂಬ ಮಹಾಮಂಡಲೇಶ್ವರ ಆಳಿದ. ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಕೊನೆಗಾಲದಲ್ಲಿ ಹೊಯ್ಸಳರು, ಗೋವೆಯ ಕದಂಬರು, ಕರಹಾಡದ ಶಿಲಾಹಾರರು ಮತ್ತು ಉಚ್ಚಂಗಿಯ ಪಾಂಡ್ಯರು ಚಾಳುಕ್ಯ ರಾಜ್ಯದ ಮೇಲೆ ಯುದ್ಧಗಳನ್ನು ಪ್ರಾರಂಭಿಸಿದಾಗ ಉಂಟಾದ ಕಷ್ಟಕರ ಪರಿಸ್ಥಿತಿಯಲ್ಲಿ ಚಾಳುಕ್ಯ ರಾಜ್ಯವನ್ನು ಕಾಪಾಡಿದ ಕೀರ್ತಿ ಎರಡನೆಯ ಆಚುಗಿಯದು. ಮೊಟ್ಟ ಮೊದಲು ಆಚುಗಿ ಹೊಯ್ಸಳರನ್ನು ಸೋಲಿಸಿ, ಅನಂತರ ಗೋವೆಗೆ ನುಗ್ಗಿ ಉಪ್ಪಿನಕಟ್ಟೆಯನ್ನು ಸುಟ್ಟುಹಾಕಿ ಎರಡನೆಯ ಜಯಕೇಶಿ ಸ್ವತಂತ್ರನಾಗದಂತೆ ಮಾಡಿ, ಉಚ್ಚಂಗಿಯ ಪಾಂಡ್ಯರಾಜ ತ್ರಿಭುವನಮಲ್ಲನನ್ನು ಸದೆಬಡಿದು, ಶಿಲಾಹಾರ ಭೋಜನನ್ನು ಸೋಲಿಸಿ ಹಿಂದಿರುಗಿದ. ಇದರಿಂದ ಸಂತೋಷಗೊಂಡ ವಿಕ್ರಮಾದಿತ್ಯ ಇವನಿಗೆ ತ್ರಿಭುವನಮಲ್ಲ ಕೇಸರಿ ಎಂಬ ಬಿರುದನ್ನು ಕೊಟ್ಟ. ಸಿಂದವಂಶದ ಅನೇಕ ಶಾಸನಗಳು ಆಚುಗಿಯ ಈ ಎಲ್ಲ ವಿಜಯಗಳನ್ನೂ ಕೊಂಡಾಡುತ್ತವೆ. ಈ ವಿಜಯಗಳ ಜೊತೆಗೆ, ಆಚುಗಿಯು ಜಗ್ಗು ಎಂಬುವನನ್ನು ಸೋಲಿಸಿದನೆಂದು ತಿಳಿದುಬರುತ್ತದೆ. ಈ ವಿಜಯಗಳಲ್ಲಿ ಇವನ ಮಗ ಒಂದನೆಯ ಪೆರ್ಮಾಡಿಯೂ ಭಾಗಿಯಾಗಿದ್ದ. ಆಚುಗಿಗೆ ಮಹಾದೇವಿ ಮತ್ತು ಚಂದಲದೇವಿ ಎಂಬ ಇಬ್ಬರು ಪತ್ನಿಯರು. ಒಂದನೆಯ ಪೆರ್ಮಾಡಿ, ಎರಡನೆಯ ಚಾವುಂಡ ಎಂಬ ಇಬ್ಬರು ಪುತ್ರರೂ ಇದ್ದರು. ಪೆರ್ಮಾಡಿ ಮಹಾದೇವಿಯ ಮಗ, ಚಾವುಂಡ ಚಂದಲದೇವಿಯ ಮಗ. ಇಮ್ಮಡಿ ಆಚುಗಿಯ ಅನಂತರ ಪೆರ್ಮಾಡಿ ತನ್ನ ಮಲಸೋದರನಾದ ಎರಡನೆಯ ಚಾವುಂಡನೊಡನೆ ಅಧಿಕಾರ ಸೂತ್ರಗಳನ್ನು ನಿರ್ವಹಿಸಿದ. ಪೆರ್ಮಾಡಿ ಹಾಗೂ ಚಾವುಂಡರು ಚಾಳುಕ್ಯ ಎರಡನೆಯ ಜಗದೇಕಮಲ್ಲ ಮತ್ತು ಮೂರನೆಯ ತೈಲಪರ ಮಾಂಡಲಿಕರಾಗಿದ್ದರು. ಪೆರ್ಮಾಡಿಯ ಕುಲಶೇಖರನನ್ನು ಸೋಲಿಸಿ, ಚಟ್ಟನ ಶಿರಶ್ಛೇದನ ಮಾಡಿ, ಜಯಕೇಶಿಯ ಬೆನ್ನಟ್ಟಿ ಹೊಯ್ಸಳ ವಿಷ್ಣುವರ್ಧನನ ರಾಜ್ಯವನ್ನು ಕಸಿದನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಇಮ್ಮಡಿ ಚಾವುಂಡ ಹೊಯ್ಸಳರನ್ನು ಸೋಲಿಸಿದುದಲ್ಲದೆ ಪಾಂಡ್ಯರ ಕಾಮದೇವನೊಡನೆಯೂ ಕಾದಿದನೆಂದು ಹೇಳಿದೆ. ಈ ಕಾಮದೇವ ಉಚ್ಚಂಗಿಯ ಪಾಂಡ್ಯ ಕುಲಕ್ಕೆ ಸೇರಿದವನು. ಇಮ್ಮಡಿ ಚಾವುಂಡನು ಕಳಚುರಿ ಬಿಜ್ಜಳನ ಇಬ್ಬರು ಮಕ್ಕಳಾದ ಲಕ್ಷ್ಮೀದೇವಿ ಮತ್ತು ಸಿರಿಯಾದೇವಿಯರನ್ನು ಮದುವೆಯಾಗಿದ್ದ. ಸಿರಿಯಾದೇವಿಗೆ ವೀರಬಿಜ್ಜಣ ಮತ್ತು ವೀರವಿಕ್ರಮ ಎಂಬ ಇಬ್ಬರು ಮಕ್ಕಳು. ಆಚುಗಿ III ಮತ್ತು ಪೆರ್ಮಾಡಿ II ಇವರು ಚಾವುಂಡನ ಇನ್ನೊಬ್ಬ ಪತ್ನಿಯಾದ ದೇಮಲದೇವಿಯ ಗರ್ಭಸಂಜಾತರು. ಚಾವುಂಡನು ಕಳಚುರಿ ಬಿಜ್ಜಳನ ಸಾಮಂತಿಕೆಯನ್ನು ಒಪ್ಪಿದ್ದ. ಆದರೆ ಕಳಚುರಿಯರ ಅನಂತರ ಚಾವುಂಡನ ಮಕ್ಕಳು ಪುನಃ ಚಾಳುಕ್ಯ ನಾಲ್ಕನೆಯ ಸೋಮೇಶ್ವರನಿಗೆ ನಿಷ್ಠೆ ತೋರಿದರು. ವೀರಬಿಜ್ಜಣ ಮತ್ತು ವೀರವಿಕ್ರಮರು ಜೊತೆಯಾಗಿ ಆಳಿದುದೊಂದು ವಿಶೇಷ. ಚಾಳುಕ್ಯರ ಅನಂತರ ಸೇವುಣರು ಇವರನ್ನು ಸೋಲಿಸಲು ಯತ್ನಿಸಿ, ಹಲವು ವರ್ಷಗಳ ಬಳಿಕ ಯಶಸ್ವಿಯಾದರು. ಸಿಂದ ವಿಕ್ರಮಾದಿತ್ಯ 1229ರಲ್ಲಿ ಸೇವುಣ ಸಿಂಘಣನ ಸಾಮಂತನಾಗಿದ್ದ ಸಂಗತಿ ತಿಳಿದು ಬರುತ್ತದೆ.

ಚಿತ್ರ-ಎರಂಬರೆಗೆಯ-ಸಿಂದರ-ವಂಶಾವಳಿ

										(ಜಿ.ಬಿ.ಆರ್.; ಎ.ವಿ.ಎನ್.)
	ಸಿಂದರು, ಬಾಗಡಗೆಯ: ಸು. 10ನೆಯ ಶತಮಾನದಲ್ಲಿ ಬಾಗಡಗೆಯಲ್ಲಿ (ಈಗಿನ ಬಿಜಾಪುರ ಜಿಲ್ಲೆಯ ಬಾಗಲಕೋಟೆ) ಅಧಿಕಾರದಲ್ಲಿದ್ದವರು. ನಾಗವಂಶಕ್ಕೆ ಸೇರಿದ್ದ ಈ ಸಿಂದರು ಭೋಗಾವತೀ ಪುರವರಾಧೀಶ್ವರ ಎಂಬ ಬಿರುದನ್ನು ಧರಿಸಿದ್ದರು. ಪಾತಾಳಲೋಕದಿಂದ ಧರಣೇಂದ್ರ ಈ ಪೃಥ್ವಿಯನ್ನು ನೋಡಬಯಸಿ ಬಂದಾಗ ಈತನಿಗೆ ಅಹಿಚ್ಛತ್ರದಲ್ಲಿ ನಿಡದೋಳ ಸಿಂದನೆಂಬ ಮಗ ಜನಿಸಿದನಂತೆ. ಆತ ಅನಂತರ ಸಿಂದ ರಾಜ್ಯದ ಅರಸನಾಗಿ ಕದಂಬ ಕುಲದ ರಾಜಕುಮಾರಿಯನ್ನು ಮದುವೆಯಾಗಿ ಅವಳಿಂದ ಮೂವರು ಮಕ್ಕಳನ್ನು ಪಡೆದ. ಕೆಲಕಾಲಾನಂತರ ಈ ಕುಲದಲ್ಲಿ ಕಮ್ಮಯ್ಯರಸನ ಮಗನಾದ ಪುಲಿಕಾಲ ಆಳಿದ. ಆತ ಚಾಳುಕ್ಯ ಇಮ್ಮಡಿ ತೈಲಪನ ಮಾಂಡಲಿಕನಾಗಿದ್ದ. ಆತನಿಗೆ ರೇವಕಬ್ಬೆಯಲ್ಲಿ ನಾಗಾದಿತ್ಯನೆಂಬ ಮಗ ಹುಟ್ಟಿದ. ಪೊಲಸಿಂದ ನೆನಿಸಿದ ಈತನಿಗೆ ಸೇವ್ಯರಸನೆಂಬ ಒಬ್ಬ ಮಗನಿದ್ದ. ಈತ ಚಾಳುಕ್ಯ ಇಮ್ಮಡಿ ಸೋಮೇಶ್ವರನ ಮಾಂಡಲಿಕನಾಗಿದ್ದ. ಈತನ ಅನಂತರ ಆಳಿದವರಾರೆಂಬುದು ತಿಳಿಯದು.				
							(ಜಿ.ಬಿ.ಆರ್.)

	ಸಿಂದರು, ಬೆಳಗುತ್ತಿಯ: ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿಗೆ ಸೇರಿದ ಬೆಳಗುತ್ತಿ ಗ್ರಾಮದ ಸುತ್ತಲಿನ ಪ್ರದೇಶಗಳ ಮಾಂಡಲಿಕರಾಗಿ ಬಾಳಿದ ಇವರು ಕರಹಾಟ ಪುರವರಾಧೀಶ್ವರ, ಮಾಳತೀದೇವಿಲಬ್ಧವರ ಪ್ರಸಾದ, ಫಣಿರಾಜವಂಶ, ವ್ಯಾಘ್ರಮೃಗಲಾಂಛನ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದರು. ಈ ವಂಶದ ಮೂಲಪುರುಷನು ಸಹ ನಿಡುದೋಳ ಸಿಂದನೇ. ಆದರೆ ಈತನ ಕುರಿತಾದ ಕಥೆ ಬಾಗಡಗೆಯ ಸಿಂದರ ಮೂಲಪುರುಷನಿಗೆ ಸಂಬಂಧಿಸಿದ ಕಥೆಗಿಂತಲೂ ಸ್ವಲ್ಪ ಭಿನ್ನವಾಗಿದೆ. ಶಿವ ಮತ್ತು ಸಿಂಧಳಿಗೆ ಜನಿಸಿದ ಈತನಿಗೆ ಸೈಂಧವನೆಂಬ ಅನ್ವರ್ಥನಾಮವನ್ನಿತ್ತರಂತೆ. ಈತ ವೀರನೂ ಧೀರನೂ ಆಗಬೇಕಾದರೆ ಸಾಧಾರಣ ಮಾನವರಂತೆ ಬೆಳೆಯಬಾರದೆಂದು ಭಾವಿಸಿದ ಗೌರೀಪತಿ ಈತ ಹುಲಿಯ ಹಾಲನ್ನು ಕುಡಿದು ಬೆಳೆಯುವಂತೆ ಮಾಡಿದ. ಅನಂತರ ಮಾಳತೀದೇವಿಯ ಸಂಗ್ರಾಮಕ್ಕೆ ಸಹಾಯವಾಗೆಂದು ಈತನಿಗೆ ಆದೇಶ ನೀಡಿ ನಿಡುದೋಳ ಸಿಂದನೆಂಬ ಎರಡನೆಯ ಹೆಸರನ್ನು ಕೊಟ್ಟ. ಈ ವಂಶದವರು ಕರಹಾಟ ನಾಲ್ಸಾಸಿರವೊಳಗಾಗನೇಕದೇಶಂಗಳನ್ನಾಳುತ್ತಿದ್ದು ಅನಂತರ ಬೆಳಗುತ್ತಿಯ ಕಡೆಗೆ ಸಾಗಿದರೆಂದು ಊಹಿಸಲಾಗಿದೆ. ಐತಿಹಾಸಿಕವಾಗಿ ಈ ವಂಶದ ಮೊದಲ ಮಾಂಡಲಿಕ ಪಿರಿಯಚಟ್ಟರಸ. ಈತನ ಪತ್ನಿ ದೋರಬ್ರರಸಿ. ಮಗ ಅಯ್ಯಣಜೋಗರಸ, ಮೊಮ್ಮಗ ಇಮ್ಮಡಿ ಚಟ್ಟರಸ. ಜೋಗರಸನು ಮಾಸೂರು 22, ಕುಂದೂರು 12 ಮತ್ತು ಕೊಳಗನೂರು 70 ಎಂಬ ಭಾಗಗಳನ್ನಾಳುತ್ತಿದ್ದ. ಇಮ್ಮಡಿ ಚಟ್ಟರಸ ಬಹುಶಃ ಇವುಗಳ ಜೊತೆಗೆ ಎಡೆವಟ್ಟೆ 70, ಅರಕೆ¾õÉ 12 ಭಾಗಗಳನ್ನಾಳುತ್ತಿದ್ದ. ಜೋಗರಸ (1060-90) ಕಲ್ಯಾಣದ ಚಾಳುಕ್ಯರ ಅರಸನಾದ ಒಂದನೆಯ ಸೋಮೇಶ್ವರನ ಮಾಂಡಲಿಕನಾಗಿದ್ದು, ಅನಂತರ ಇಮ್ಮಡಿ ಸೋಮೇಶ್ವರ ಹಾಗೂ 6ನೆಯ ವಿಕ್ರಮಾದಿತ್ಯರ ಅಧೀನದಲ್ಲಿ ಅಧಿಕಾರದಲ್ಲಿದ್ದ. ಈತನ ಅನಂತರ ಈತನ ಮಗ ಎರಡನೆಯ ಚಟ್ಟರಸ ಆಳಿದ. ಈತನ ಮಗ ಒಂದನೆಯ ಈಶ್ವರದೇವನ ವಿಷಯ ಹೆಚ್ಚಿಗೆ ತಿಳಿಯದು.

	ಈಶ್ವರದೇವನ ಮೂವರು ಮಕ್ಕಳಲ್ಲಿ ಕೊನೆಯವನಾದ ಐಹರಸನ ಮೊಮ್ಮಗ ಇಮ್ಮಡಿ ಈಶ್ವರದೇವ. ಈತ ಈ ಸಿಂದರಲ್ಲಿ ಅತಿ ಪ್ರಮುಖನಾಗಿದ್ದು, ತನ್ನ ಅಧಿಕಾರ ಕ್ಷೇತ್ರವನ್ನು ವಿಸ್ತರಿಸಿಕೊಂಡ. ಬನವಸೆನಾಡೊಳಗಣ ಕಂಪಣ ಮಾಸೂರು 12, ಎಡೆವಟ್ಟೆ 70, ಬಳ್ಳವೆ 70, ನರಿಯಳಿಗೆ 40, ಸಾನ್ತಳಿಗೆ ಸಾಯಿರದೊಳಗಣ ಮಲೆ 70, ಮುದುವರೆ 70, ಮಂದಲಿ ನಾಡೊಳಗೆ ಹೊಳಲೂರು 12, ನೊಣಂಬವಾಡಿ ನಾಡೊಳಗೆ ಮನುಜವೊಳಲು 12, ಕೊಳ್ಳಿಗುಪ್ಪತ್ತು, ಅರಕೆ¾õÉ 12, ಬ್ರಾನ್ತಿ 30, ಕುಂದೂರು 70, ಅಯ್ವತ್ತಾ¾ುಬಾಡ ಅತ್ತಿಗೇರಿ 12, ಪಡುಗಲು 12, ಆಸನ್ದಿನಾಡೊಳಗೆ ಅರಬಲ 70, ಕಳಿಕಟ್ಟೆ 12 ಮುಂತಾದ ಕಂಪಣಗಳನ್ನು ತನ್ನ ರಾಜಧಾನಿಯಾದ ಹಳ್ಳವುರದಿಂದ (ಧಾರವಾಡ ಜಿಲ್ಲೆ ಹಿರೆಕೆರೂರು ತಾಲ್ಲೂಕಿನ ಹಳ್ಳೂರು) ಆಳುತ್ತಿದ್ದನೆಂದು 1165ರ ಶಾಸನವೊಂದರಲ್ಲಿ ಹೇಳಿರುವುದನ್ನು ಗಮನಿಸಿದರೆ ಈತನ ಅಧಿಕಾರ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಹಾಗೂ ಸ್ವಲ್ಪಮಟ್ಟಿಗೆ ಬಳ್ಳಾರಿ ಜಿಲ್ಲೆಗಳಲ್ಲಿ ಹಬ್ಬಿತ್ತೆನ್ನಬಹುದು. ಇವನ ಮಾವನಾದ ಅಲ್ಲಮರಸ ಈತನಿಗೆ ಬೆಂಬಲವಾಗಿದ್ದ. ಕಳಚುರಿ ಬಿಜ್ಜಳ ಆಳತೊಡಗಿದಾಗ ಈ ಸಾಮಂತ ಅವನಿಗೆ ಸಹಾಯ ನೀಡಿದನೆಂದು ತೋರುತ್ತದೆ. ಇವನು ಬಿಜ್ಜಳದೇವನ ವಿಜಯರಾಜ್ಯಾಭ್ಯುದಯಕಾರಣ ನೆಂದು ಕರೆದುಕೊಂಡಿದ್ದಾನೆ. ವಾಸ್ತವವಾಗಿ ಕಳಚುರಿ-ಹೊಯ್ಸಳ-ಸೇವುಣರ ನಡುವಣ ಕಲಹಗಳ ಪ್ರಯೋಜನ ಪಡೆದು ಸ್ವತಂತ್ರವಾಗಿ ಆಳುವ ಉದ್ದೇಶ ಈತನದಾಗಿತ್ತು. ಆದರೆ ಇದರಲ್ಲಿ ಈತ ಯಶಸ್ವಿಯಾಗ ಲಿಲ್ಲ. ಕೆಲವು ಕಾಲ ಹೊಯ್ಸಳ ಇಮ್ಮಡಿ ಬಲ್ಲಾಳನ, ಕೆಲವು ಕಾಲ ಕಳಚುರಿ ಸಂಕಮನ ಮಾಂಡಲಿಕನಾಗಿಯೇ ಈತ ಉಳಿದ. ಚಾಳುಕ್ಯ ರಾಜ್ಯ ಹೊಯ್ಸಳ ಮತ್ತು ಸೇವುಣರ ನಡುವೆ ಹಂಚಿಹೋದಾಗ ಅವರ ನಡುವಣ ಕದನಗಳಲ್ಲಿ ಈ ಬೆಳಗುತ್ತಿಯ ಸಿಂದರು ನರಳಿದರು. ಇವರ ಆಳಿಕೆಯ ತುಂಗಭದ್ರಾತೀರದ ಪ್ರದೇಶ ರಣರಂಗವಾಯಿತು. ಸಿಂದ ಇಮ್ಮಡಿ ಮಲ್ಲಿದೇವನು ಬಲ್ಲಾಳನ ಅರಸಿಯಾದ ಉಮಾದೇವಿಯ ಕಟ್ಟಾಳುಗಳನ್ನು ಎದುರಿಸಿ ಸೋಲನ್ನಪ್ಪಿದ. ಮುಮ್ಮಡಿ ಈಶ್ವರದೇವನ ವಶದಲ್ಲಿದ್ದ ಅನೇಕ ಭಾಗಗಳು ಈಗ ಆತನ ಕೈಬಿಟ್ಟವು. ಆತ ಸೇವುಣ ಸಿಂಘಣನ ಸ್ನೇಹ ಮಾಡಿಕೊಂಡು, ಸಿಂಹಣ ರಾಜ್ಯಾಭ್ಯುದಯ ಕಾರಣನೆನಿಸಿಕೊಂಡು ಮೊದಲಿನ ಬಯಕೆಯನ್ನು ಈಡೇರಿಸಿಕೊಳ್ಳಲು ಯತ್ನಿಸಿದನಾದರೂ ವಿಫಲನಾದ. ಅಂತಿಮವಾಗಿ ಬಹುಶಃ ರಣರಂಗದ ಲ್ಲಿಯೇ ಮಡಿದ. ಇವನ ಬಳಿಕ ಇನ್ನೂ ಇಬ್ಬರು ಬೆಳಗವತ್ತಿಗೆಯಲ್ಲಿ (ಬೆಳಗುತ್ತಿ) ಇದ್ದರಾದರೂ ಅದು ಬಹುಶಃ ಕೇವಲ ಸಾಂಕೇತಿಕವಾದ ಅಧಿಕಾರವೆನ್ನಬಹುದು. ಹೀಗೆ ಸುಮಾರು ಎರಡು ಶತಮಾನಗಳ ಆಳಿಕೆಯ ಅನಂತರ ಇವರು ಕಣ್ಮರೆಯಾದರು.

ಚಿತ್ರ-ಬೆಳಗುತ್ತಿಯ-ಸಿಂದರ-ವಂಶಾವಳಿ

	ಸಿಂದರು, ರೆಂಜೇ¾ುವಿನ: ರೆಂಜೇ¾ು ಈಗಿನ ಬೀದರ್ ಜಿಲ್ಲೆಯಲ್ಲಿ ಭಾಲ್ಕಿ ತಾಲ್ಲೂಕಿನಲ್ಲಿರುವ ಖೇಣಿರೆಂಜೋಲ್ ಎಂಬ ಗ್ರಾಮ. 11-12ನೆಯ ಶತಮಾನಗಳಲ್ಲಿ ಈ ಸುತ್ತಲಿನ ಪ್ರದೇಶದಲ್ಲಿ ಸಿಂದವಂಶದ ಶಾಖೆಯೊಂದಕ್ಕೆ ಸೇರಿದ ಇವರು ಮಾಂಡಲಿಕರಾಗಿ ಆಳುತ್ತಿದ್ದರು. ಈ ಶಾಖೆಯ ಮೂಲಪುರುಷ ನಿಡುದೋಳಸಿಂದ. ಈತನನ್ನು ಕುರಿತು ಇವರ ಶಾಸನಗಳಲ್ಲಿ ಭಿನ್ನವಾದ ಕಥೆಯೊಂದಿದೆ. ಉರಗಲೋಕಾಧಿಪನಾದ ಧರಣೇಂದ್ರನ ಪತ್ನಿಯಾದ ಪದ್ಮಾವತಿಗೆ ರಾಜಧಾನಿಯಾದ ಭೋಗಾವತೀಪುರದಲ್ಲಿ ಗರ್ಭಚಿಹ್ನೆಗಳು ಕಾಣಿಸಿಕೊಂಡು, ಆಕೆ ಸಿಂಧೂನದಿಯಲ್ಲಿ ಜಲಕ್ರೀಡೆಯಾಡ ಬಯಸಿದಳು. ಅದಕ್ಕೆಂದು ಧರಣೀತಳಕ್ಕೆ ಬಂದಾಗ, ಉದಯಿಸುತ್ತಿದ್ದ ಸೂರ್ಯನಿಗೆ ಅಘ್ರ್ಯವನ್ನು ಕೊಟ್ಟು ಅವನಂಥ ಮಗ ಹುಟ್ಟಲಿ ಎಂದು ಪ್ರಾರ್ಥಿಸಿದಳು. ಅದು ಈಡೇರಿತು. ಸೂರ್ಯನ ತೇಜಸ್ಸು, ಸಾಮಥ್ರ್ಯಗಳನ್ನು ಪಡೆದು ಧರಣೀತಳದಲ್ಲಿ ಹುಟ್ಟಿದ ಮಗುವನ್ನು ಅಲ್ಲಿಯೇ ಬಿಟ್ಟು, ಮಗುವಿನ ರಕ್ಷಣೆಯನ್ನು ವನಸಾರ್ದೂಳಿಗೆ (ಶಾರ್ದೂಲ) ಒಪ್ಪಿಸಿ ಹಿಂತಿರುಗಿದಳು. ಆ ಮಗು ಹುಲಿಯ ಮೊಲೆಯುಂಡು ಬೆಳೆಯಿತು. ಇಂಥ ಮಗುವನ್ನು ಒಬ್ಬ ತಳಾರ ಕಂಡು ಅಹಿಚ್ಛತ್ರದ ವಿಪ್ರರಿಗೆ ಸುದ್ದಿ ಕೊಟ್ಟ. ಅವರು ಅವನನ್ನು ತಮ್ಮಲ್ಲಿಗೆ ಕರೆದೊಯ್ದರು. ಅವನಿಗೆ ಅನ್ನಪ್ರಾಶನ, ಚೌಲೋಪನಯನಗಳನ್ನು ಮಾಡಿಸಿದರು. ಶಸ್ತ್ರಶಾಸ್ತ್ರಗಳಲ್ಲಿ ಪರಿಣತಿ ಪಡೆದ ಅವನಿಗೆ ಕದಂಬ ಮಯೂರಶರ್ಮನ ಮಗಳನ್ನು ತಂದುಕೊಂಡು ಮದುವೆ ನಡೆಸಿದರು. ಆಕೆಯ ಹೆಸರು ಲಕ್ಷ್ಮೀಮತಿ. ಸಿಂಧುವಿನ ನೆರಳಿನಲ್ಲಿ ಬೆಳೆದ ಈತ ಸಿಂದನೆಂಬ ಹೆಸರನ್ನು ಪಡೆದ. ಈ ಬಾಂಧವ್ಯದ ಬಗೆಗೆ ಮೊದಲು ಸೂಚಿಸಿದಾಗ ಮಯೂರಶರ್ಮ ಕೋಪಗೊಂಡ. ಆಗ ಆತನ ನೊಸಲಕಣ್ಣಿನ ಉರಿಯನ್ನು ತನ್ನ ನಿಡಿದಾದ ತೋಳಿನಿಂದ ಆರಿಸಿದನಾದ ಕಾರಣ ಈತನಿಗೆ ನಿಡುದೋಳ ಸಿಂದನೆಂದು ಹೆಸರು ಬಂತು. ಈತನಿಗೆ ಪ್ರಭುಸೇವ್ಯ, ಸತ್ಯಸೇವ್ಯ, ಜಗತ್ಸೇವ್ಯ ಮತ್ತು ಬುಧಸೇವ್ಯ ಎಂಬ ನಾಲ್ವರು ತನಯರು. ಇವರು ಕ್ರಮವಾಗಿ ಪಳಿಯಂಡ, ಬಾಗಡಗೆ, ಬಳ್ಳವೆ ಮತ್ತು ಅಟ್ಟಳೆ ನಾಡುಗಳ ಅಧಿಪತಿಗಳಾಗಿ ನೆಲಸಿದರು. ಅಟ್ಟಳೆ ನಾಡಿಗೆ ಬಂದ ಜಗತ್ಸೇವ್ಯನ ವಂಶದಲ್ಲಿ ಕುನ್ನುಲ ಮತ್ತು ಬೊಪ್ಪುಲರೆಂಬ ವೀರರು ಜನಿಸಿದರು.

ಚಿತ್ರ-ರೆಂಜೇ¾ುವಿನ-ಸಿಂದರ-ವಂಶಾವಳಿ
	
ಅವರ ಅನಂತರ, ಕಾಲಕ್ರಮೇಣ ದುಗ್ಗತಿ, ಹರಕತಿಗಳು ಆಳಿದರು. ಆದರೆ ಇವರು ಯಾರೂ ಐತಿಹಾಸಿಕ ವ್ಯಕ್ತಿಗಳಲ್ಲ.

	ಇದುವರೆಗೆ ತಿಳಿದಂತೆ ಈ ವಂಶಕ್ಕೆ ಸೇರಿದ ಮೊದಲ ಮಾಂಡಲಿಕ ಅಲ್ಲಮ, ಆತನ ಮಗ ಬದ್ದೆಗ, ಆತನ ಇಬ್ಬರು ಮಕ್ಕಳು ಗೊಣ್ನ ಮತ್ತು ಗೊಂಕ. ಶಾಸನಾಧಾರಗಳಿಂದ ಹಜ್ಜರಸ ಇದೇ ವಂಶಕ್ಕೆ ಸೇರಿದವನ್ನೆನಬಹುದು. ಇವನಿಗೂ ಮೇಲೆ ಸೂಚಿಸಿದ ಗೊಣ್ನ-ಗೊಂಕರಿಗೂ ಇದ್ದ ಸಂಬಂಧ ಯಾವ ರೀತಿಯದು ಎಂಬ ಸಂಗತಿ ತಿಳಿಯದು. ಹಜ್ಜರಸ ಅಟ್ಟಳೆ ನಾಡನ್ನು (ಭಾಲ್ಕಿ ತಾಲ್ಲೂಕಿನ ಸುತ್ತಲ ಪ್ರದೇಶ) ಆಳುತ್ತಿದ್ದ. ಈತ ಸು. 1090-1115ರ ವರೆಗೆ ಆಳಿದ. ಈತನ ಪತ್ನಿ ಹಮ್ಮಲದೇವಿ, ಮಗ ಪೆರ್ಮಾಡಿ. ಈತ ಚಾಳುಕ್ಯ ಭೂಲೋಕಮಲ್ಲ ಮುಮ್ಮಡಿ ಸೋಮೇಶ್ವರನ ಸಾಮಂತನಾಗಿದ್ದ. ಈತನ ಪತ್ನಿ ಮೈಳಲದೇವಿ. 1169ರ ರೆಂಜೋಲ್ ಗ್ರಾಮದ ಶಾಸನದಿಂದ ಈತನಿಗೆ ಭೈರವನೆಂಬ ಮಗನಿದ್ದು ಆತನ ಮಗ ಹೆಮ್ಮನೆಂದೂ (ಇಮ್ಮಡಿ ಪೆರ್ಮಾಡಿ) ಹೆಮ್ಮನಿಗೆ ಬಾಚಿದೇವ ಮತ್ತು ಬರ್ಮದೇವ ಎಂಬಿಬ್ಬರು ಮಕ್ಕಳಿದ್ದರೆಂದೂ ತಿಳಿಯುತ್ತದೆ. ಬರ್ಮದೇವ ಕಳಚುರಿ ಸೋವಿದೇವನ ಸಾಮಂತನಾಗಿದ್ದ. ಅನಂತರ ಈ ಮಾಂಡಲಿಕರು ಸೇವುಣರ ಹಾಗೂ ಆ ಬಳಿಕ ವಾರಂಗಲ್ಲಿನ ಕಾಕತೀಯರ ಸಾಮಂತ ರಾದರೆಂದು ಶಾಸನಾಧಾರಗಳಿಂದ ತಿಳಿದಿದೆ. ಈ ವಂಶದ ಭೈರವನೂ ಕಾಕತೀಯ ರುದ್ರಮದೇವಿಯ ಸಾಮಂತನಾಗಿದ್ದು ಸೇವುಣರೇ ಮೊದಲಾದ ಹಲವಾರು ಅರಸರನ್ನು ಸೋಲಿಸುವುದರಲ್ಲಿ ಅರಸಿಗೆ ನೆರವಾಗಿದ್ದ.					
	(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ